ಬಿಡಾಡಿ ದನಗಳ ಎತ್ತಂಗಡಿ
ಸಾರ್ವಜನಿಕರಲ್ಲಿ ಮೆಚ್ಚಿಗೆ ಪಾತ್ರರಾದ ಕಮಿಷನರ್ ಜಮಖಂಡಿ.
ತುಂಗಾವಾಣಿ.
ಗಂಗಾವತಿ: ಅ-20 ದಿನ ಬೆಳಗಾದರೆ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಉಪಟಳ. ಜಾನುವಾರು ಕಾಟಕ್ಕೆ ಬೇಸತ್ತಿರುವ ವಾಹನ ಸವಾರರ ಸಂಕಷ್ಟಕ್ಕೆ ನಗರಸಭೆ ಸಿಬ್ಬಂದಿ ಸ್ಪಂದಿಸಿದೆ.
ಹೌದು ಸೋಮವಾರ ತಡ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸುವ ಮೂಲಕ ಬಿಡಾಡಿ ದನಗಳನ್ನು ಹಳೆ ಐಬಿಗೆ ಸ್ಥಳಾಂತರ ಮಾಡುವ ಕೆಲಸ ನಡೆಯಿತು.
ನಗರದ ಗಂಗಾವತಿ ಪ್ರಮುಖ ವೃತ್ತಗಳಲ್ಲಿ, ರಾಯಚೂರು ರಸ್ತೆ, ಕೊಪ್ಪಳ ರಸ್ತೆಗಳಲ್ಲಿ ವಾಹನಗಳಿಗಿಂತ ಜಾನುವಾರುಗಳೇ ಹೆಚ್ಚುತ್ತಿವೆ. ರಸ್ತೆಗೆ ಇಳಿಯುತ್ತಿವೆ. ಕಳೆದ ಸುಮಾರು ತಿಂಗಳಿನಿಂದ ಜಾನುವಾರು ಕಾಟ ಮಿತಿಮೀರಿದೆ. ಈ ಬೆಳವಣಿಗೆಯಿಂದಾಗಿ ಜನಾಕ್ರೋಶಕ್ಕೆ ಗುರಿಯಾಗಿದ್ದ ನಗರಸಭೆಯವರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಎಲ್ಲೆಂದರಲ್ಲಿ ಮಲಗುತ್ತಿದ್ದ ಜಾನುವಾರುಗಳನ್ನು ನಗರಸಭೆ ಪಕ್ಕದಲ್ಲಿರುವ ಹಳೆ ಐಬಿಗೆ ಓಡಿಸಿ ಕೊಂಡು ಬಂದು, ಅಲ್ಲಿಯೇ ಕಟ್ಟಿ ಹಾಕಲಾಯಿತು. ನಗರ ಪ್ರದೇಶದಲ್ಲಿ ಭಾರಿ ಪ್ರಮಾಣದ ಗೋವುಗಳು ಬೀದಿಗೆ ಬಂದರೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸಿಲ್ಲ. ಮಾಲೀಕರ ಬೇಜವಾಬ್ದಾರಿಯಿಂದ ಜಾನುವಾರುಗಳಿಗೆ ಮೇವೂ ಇಲ್ಲವಾಗಿದೆ. ರಸ್ತೆ ಬದಿ ಬಿದ್ದ ಪ್ಲ್ಯಾಸ್ಟಿಕ್, ಕಸವನ್ನೇ ತಿಂದು ದನಗಳು ಬದುಕುವಂತಾಗಿದೆ.
ನಗರಸಭೆ ಕಾರ್ಯ ಅಚ್ಚರಿ:
ತಡ ರಾತ್ರಿ ಏಕಾಏಕಿ ಆಕಳು ಮತ್ತು ಹೋರಿ, ದನಗಳನ್ನು ಐಬಿ,ಯಲ್ಲಿ ಇರುವುದನ್ನು ಕಂಡ ಜನ ಅಚ್ಚರಿಗೆ ಒಳಗಾದರು. ನಗರಸಭೆಗೆ ನಾನಾ ಕೆಲಸಕ್ಕೆ ಬಂದವರು ಇಲಾಖೆಯವರು ವಿವಿಐಪಿಗಳು ಇರುವ ಜಾಗದಲ್ಲಿ ದನಗಳು ಇವೆಯಲ್ಲ ಎಂದು ಆಶ್ಚರ್ಯಕರವಾಗಿ ನೋಡುತ್ತಿದ್ದರು, ಆದರೆ ಬಿಡಾಡಿ ದನಗಳ ಸಮಸ್ಯೆ ಅರಿತವರು ನಿಟ್ಟಿಸಿರು ಬಿಟ್ಟರು. ಸುಮಾರು ಐವತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಐಬಿ ಯಲ್ಲಿ ಕಟ್ಟಿ ಹಾಕಿದರು. ಕೆಲ ಜಾನುವಾರುಗಳು ಹೊರಗಡೆ ಹೋಗಲು ಪ್ರಯತ್ನಿಸಿದವಾದರು ಆಗಲಿಲ್ಲ. ಪೊಲೀಸ್ ಸಿಬ್ಬಂದಿ ಸಹ ಕಾರ್ಯಾಚರಣೆಗೆ ಸಾಥ್ ನೀಡಿದ್ರು.
ಜನರಿಗೆ ಕಿರಿಕಿರಿ:
ದಿನವೂ ಬೆಳಗಾದರೆ ರಸ್ತೆಯಲ್ಲಿ ಸಂಚರಿಸಲು ಜನ ಭಯಪಡುವಂತಾಗಿದೆ. ಅಡ್ಡಾದಿಡ್ಡಿಯಾಗಿ ಜಾನುವಾರುಗಳು ವಾಹನಕ್ಕೆ ಅಡ್ಡ ಬರುವುದರಿಂದ ಬಹುತೇಕರು ಮಗುಚಿ ಬೀಳುತ್ತಿದ್ದಾರೆ. ಕೆಲವರು ಆಕಳುಗಳ ಕಾಲುಗಳ ಮೇಲೆಯೇ ವಾಹನ ಹಾಯಿಸಿ, ಮರುಕ ಪಡುತ್ತಿದ್ದಾರೆ. ಜಾನುವಾರು ಮಾಲೀಕರು ಯಾರೆಂಬುದನ್ನು ಕಂಡುಹಿಡಿಯಲು ನಗರಸಭೆಯವರು ಹೈರಾಣಾಗಿದ್ದಾರೆ. ಈ ವಿಷಯವಾಗಿ ಹಲವು ಬಾರಿ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ದಿನೇದಿನೆ ಕಿರಿಕಿರಿ ಹೆಚ್ಚಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಆದರೀಗ ನಗರಸಭೆಯವರು ಕಾರ್ಯಾಚರಣೆ ಆರಂಭಿಸಿದ್ದು, ಬಿಡಾಡಿ ದನಗಳ ಮಾಲೀಕರಿಗೆ ಇನ್ನಾದರೂ ಜಾಗೃತಿ ಮೂಡುವುದೇ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ಹಲವು ದಿನಗಳಿಂದ ಬಿಡಾಡಿ ದನಗಳ ಕಾಟ ಹೆಚ್ಚಿತ್ತು. ಮಾಲೀಕರಿಗೆ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ರಸ್ತೆಗಳಲ್ಲಿಯೇ ಜಾನುವಾರು ಮಲಗುವುದರಿಂದ ಸಮಸ್ಯೆಯಾಗುತ್ತಿದೆ. ಜಾನುವಾರು ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಲಾಗುವುದು, ಒಂದು ವೇಳೆ ಅದರ ಮಾಲೀಕರು ಬಾರದಿದ್ದರೆ ಟ್ರ್ಯಾಕ್ಟರ್ನ ಮೂಲಕ ಗೋಶಾಲೆಗೆ ಬಿಡಲಾಗುತ್ತಿದೆ.
–ಅರವಿಂದ ಜಮಖಂಡಿ ಪೌರಾಯುಕ್ತರು, ನಗರಸಭೆ ಗಂಗಾವತಿ,
ನಗರದ ಯಾವ ರಸ್ತೆ ನೋಡಿದರೂ ಜಾನುವಾರುಗಳೇ ಕಾಣುತ್ತಿವೆ. ಜಾನುವಾರು ಸಾಕುವವರು ಹೀಗೆ ಬೇಜವಾಬ್ದಾರಿ ವಹಿಸಬಾರದು. ಅವುಗಳನ್ನು ಬೀದಿಗೆ ಬಿಟ್ಟರೆ ಉಪವಾಸದಿಂದ ಸತ್ತು ಹೋಗುತ್ತವೆ. ನಗರಸಭೆಯವರು ಬಿಡಾಡಿ ದನಗಳನ್ನು ಗೋಶಾಲೆಯಲ್ಲಿ ಮೇವು ಹಾಕಿ ಸಲಹುವುದು ಸೂಕ್ತ.
-V.N ಪಾಟೀಲ್ ಹಿರಿಯ ವಕೀಲರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.