ಬಣ್ಣ ಬದಲಿಸಿದ ಸಂಗಮೇಶ : ಹಂಪೇಶ ಹರಿಗೋಲ ಆಕ್ರೋಶ.!
ತುಂಗಾವಾಣಿ.
ಗಂಗಾವತಿ: ಡಿ-17 ತಾಲೂಕಿನ ಪ್ರಮುಖ ವೃತ್ತಗಳಲ್ಲಿ ಇರುವ ತಾಯಿ ಭುವನೇಶ್ವರಿಯ ಧ್ವಜದ ಕಟ್ಟೆಗಳಿಗೆ ಬಿಳಿ ಬಣ್ಣ ಹಚ್ಚುತ್ತಿರುವ ಗುತ್ತಿಗೆದಾರ ಸಂಗಮೇಶ ಅವರ ಕಾರ್ಯವೈಖರಿ ವಿರುದ್ಧ ದಲಿತ ಮುಖಂಡ ಹಾಗೂ ಕನ್ನಡ ಜಾಗೃತಿ ಸಮಿತಿ ಸಂಗಾಪುರ ಅಧ್ಯಕ್ಷ ಹಂಪೇಶ ಹರಿಗೋಲ ತೀವ್ರ ಹರಿಹಾಯ್ದಿದ್ದಾರೆ.
ಇತ್ತೀಚಿಗೆ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತಿಯೊಂದನ್ನೂ ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಚಟ ಅಂಟಿಸಿಕೊಂಡಿದ್ದಾರೆ. ಅಂತಹವರ ಸಾಲಿನಲ್ಲಿ ಗುತ್ತಿಗೆದಾರ ಸಂಗಮೇಶ (ಸುಗ್ರೀವಾ) ಕೂಡ ಒಬ್ಬರು ಅನಿಸುತ್ತೆ.!? ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅಂತಹ ನಾಡಿನ ಐಕ್ಯತೆ ಸಾರುವ ಸಂಕೇತವೇ ಕನ್ನಡಾಂಭೆಯ ಧ್ವಜ. ಧ್ವಜದಲ್ಲಿ ಅರಿಶಿನ ಮತ್ತು ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಇದು ಲಾಂಛನದ ಹಿರಿಮೆಯೂ ಕೂಡ. ಅಂತಹ ಲಾಂಛನದ ಕಟ್ಟೆಗಳಿಗೆ ಈ ಹಿಂದಿನಿಂದಲೂ ಅರಿಶಿನ ಮತ್ತು ಕೆಂಪು ಬಣ್ಣಗಳನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಅದ್ಯಾವ ತಲೆಮಾಸಿದ ವ್ಯಕ್ತಿ ಸಲಹೆ ನೀಡಿದನೋ ಗೊತ್ತಿಲ್ಲ. ತಲೆಕೆಟ್ಟವರಂತೆ ನೂರು ರೂಪಾಯಿಯ ಬಣ್ಣದ ಡಬ್ಬಿಯನ್ನು ಹಿಡಿದುಕೊಂಡು ಓಡಾಡುತ್ತಿರುವ ಸಂಗಮೇಶ ಕನ್ನಡಾಂಭೆಯ ಧ್ವಜದ ಕಟ್ಟೆಯನ್ನು ಬಿಳಿಯ ಬಣ್ಣ ಬಳಿಯುವ ಮೂಲಕ ವಿರೂಪಗೊಳಿಸುತ್ತಿದ್ದಾರೆ ಎಂದು ಹಂಪೇಶ ಹರಿಗೋಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಚಾರ ಪಡೆಯುವ ಸಣ್ಣತನವನ್ನು ಸಂಗಮೇಶ ಬಿಡಬೇಕು. ನಿಜವಾಗಿಯೂ ಕನ್ನಡಾಂಭೆಯ ಬಗ್ಗೆ ಗೌರವ ಇದ್ದಿದ್ದೇ ಆದಲ್ಲಿ ಧ್ವಜದ ಕಟ್ಟೆಯ ಸುತ್ತ ಕಬ್ಬಿಣದ ಗ್ರಿಲ್‍ಗಳನ್ನು ನಿರ್ಮಿಸಲಿ ಮತ್ತು ಪ್ರತಿ ಭುವನೇಶ್ವರಿಯ ವೃತ್ತದ ಬಳಿ ತಾಯಿ ಕನ್ನಡಾಂಭೆಯ ಪುತ್ಥಳಿ ನಿರ್ಮಿಸಲಿ ಎಂದು ಸವಾಲ್ ಎಸೆದ ದಲಿತ ಮುಖಂಡ, ಇನ್ನಾದರೂ ಸಂಗಮೇಶ ಧ್ವಜ ಕಟ್ಟೆಗಳಿಗೆ ಬಿಳಿ ಬಣ್ಣ ಬಳಿಯುವ ಹುಚ್ಚಾಟವನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ತಾಯಿ ಭುವನೇಶ್ವರಿಯ ಧ್ವಜದ ಕಟ್ಟೆಗೆ ಅರಿಶಿನ ಮತ್ತು ಕೆಂಪು ಬಣ್ಣವನ್ನು ಹಚ್ಚಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಂಬಣ್ಣ, ಗೋಪಾಲಕೃಷ್ಣ, ಗೋವಿಂದ, ತಿಮ್ಮಪ್ಪ, ದುರುಗಣ್ಣ, ಈಶಪ್ಪ ಲಮಾಣಿ, ಗೋವಿಂದ ಕುರುಬರು, ಖಾಜಾಸಾಬ್, ಕೊಟ್ರೇಶ ಉಪ್ಪಾರ ಇನ್ನಿತರರಿದ್ದರು.
ಸಂಗಮೇಶ ತಾಲೂಕಿನಾದ್ಯಂತ ತಾಯಿ ಭುವನೇಶ್ವರಿಯ ಧ್ವಜ ಕಟ್ಟೆಗಳಿಗೆ ಬಿಳಿಯ ಬಣ್ಣ ಬಳಿಯುತ್ತಿದ್ದರೂ ಕಂಡೂ ಕಾಣದಂತೆ ಮೌನಕ್ಕೆ ಶರಣಾದ ಕನ್ನಡಪರ ಸಂಘಟನೆಗಳ ಹೋರಾಟಗಾರರ ನಿಲುವು ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ತಮ್ಮ ನಿಲುವು ಸ್ಪಷ್ಟ ಪಡಿಸಲಿ ಎಂಬುವುದು ಪ್ರಜ್ಞಾವಂತರ ಆಶಯ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.