ಮೊಹರಂ ಹಬ್ಬದ ಗಲಾಟೆಗೆ ಜಾತಿ ನಿಂದನೆಯ ಮೊಹರು:
ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ್ರಾ ಅಧಿಕಾರಿಗಳು…?
ತುಂಗಾವಾಣಿ.
ಗಂಗಾವತಿ : ಇತ್ತೀಚೆಗೆ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಸಂಭ್ರಮದಲ್ಲಿ ನಡೆದ ಎರಡು ಸಮುದಾಯಗಳ ಗುಂಪು ಘರ್ಷಣೆಯ ಪ್ರಕರಣವನ್ನು ನಿಭಾಯಿಸುವಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸರು ಎಡವಿದರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಪ್ರತಿಯೊಂದು ಹಬ್ಬವು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ನಡೆಯುತ್ತವೆ ಮತ್ತು ಹಾಗೆ ನಡೆಯುವಂತೆ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುವುದು ಕೂಡ ತಾಲೂಕಾಡಳಿತದ ಹೊಣೆಯೂ ಕೂಡ. ಆದರೆ, ಸಣ್ಣಪುಟ್ಟ ಜಗಳಗಳು ಕೆಲವೇ ಕೆಲ ಕಿಡಿಗೇಡಿಗಳು ಹಾಗೂ ಸಮುದಾಯಗಳ ಮುಖಂಡರ ಜಿದ್ದಿನಿಂದಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅಂತಹದೇ ರೀತಿಯ ಸದ್ದು ಮಾಡಿರುವುದು ಸಿಂಗನಾಳ ಗ್ರಾಮದಲ್ಲಿ ನಡೆದ ಮೊಹರಂ ಘರ್ಷಣೆ. ಮೊಹರಂ ಹಬ್ಬ ಹಿಂದು ಮತ್ತು ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಪ್ರತಿಯೊಂದು ಸಮುದಾಯದಲ್ಲೂ ಮೊಹರಂ ಹಬ್ಬವನ್ನು ವಿವಿಧ ಹರಕೆಗಳನ್ನು ಕಟ್ಟುವ ಮೂಲಕ ಬಹುಶ್ರದ್ಧೆಯಿಂದ ಆಚರಿಸುತ್ತಾರೆ. ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಮಾಡುವ ಕೃತ್ಯದಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತವೆ.
ಸಿಂಗನಾಳ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ಸಂಘರ್ಷಣೆ ನಡೆಯುವಾಗ ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿತ್ತು? ಕೋವಿಡ್ ನಿಯಮಾನುಸಾರ ಹಬ್ಬಗಳನ್ನು ಆಚರಿಸುವಂತೆ ಪೂರ್ವಭಾವಿ ಸಭೆಗಳಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಆದರೆ, ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸದಿರುವುದು ಪೊಲೀಸ್ ಇಲಾಖೆ ವೈಫಲ್ಯಕ್ಕೆ ಸಾಕ್ಷಿ. ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿತ್ತು. ಆಕಸ್ಮಿಕವಾಗಿ ಗಲಾಟೆ ನಡೆದಿದ್ದರೂ ಕೂಡ ತಾಲೂಕು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಯಾ ಸಮುದಾಯದ ಮುಖಂಡರುಗಳನ್ನು ಒಂದೆಡೆ ಸೇರಿಸಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ, ಅಹಂಗೆ ಬಿದ್ದ ಕೆಲ ಮುಖಂಡರು ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಬರೋಬ್ಬರಿ 41 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಯಾಕೆಂದರೆ ಹಿಂದು ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ ಆಕಸ್ಮಾತ್ ಹಿಂದು-ಮುಸ್ಲಿಂ ಸಮುದಾಯದ ನಡುವೆ ನಡೆದಿದ್ದರೆ ಕೋಮುಗಲಭೆ ಸೃಷ್ಠಿಯಾಗುತ್ತಿರಲಿಲ್ಲವೇ ಎಂಬುವುದು ಸ್ಥಳೀಯರ ಆತಂಕ. ಯಾಕೆಂದರೆ, ಒಬ್ಬಿಬ್ಬರು ಮಾಡಿದ ತಪ್ಪಿಗೆ ಉಳಿದ ಅಮಾಯಕರು ಕೋರ್ಟು ಕಚೇರಿಗೆ ಅಲೆಯುವಂತಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಿ ಪ್ರಕರಣವನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಿತ್ತು ಎಂಬುವುದು ಪ್ರಜ್ಞಾವಂತರ ಸಲಹೆ.
ಇನ್ನು ಪ್ರತಿಬಾರಿಯಂತೆ ಈ ಬಾರಿಯೂ ಹಬ್ಬಗಳು ಅಷ್ಟೇನೂ ಅದ್ಧೂರಿಯಾಗಿ ಆಚರಿಸುತ್ತಿಲ್ಲ. ಕೋವಿಡ್ ಸಂಕಷ್ಟ ಹಾಗೂ ಆರ್ಥಿಕ ಹಿನ್ನಡೆಯ ನಡುವೆ ಜನರೂ ಕೂಡ ನಲುಗಿಹೋಗಿದ್ದು, ಹಬ್ಬದ ಸಂಭ್ರಮ ಯಾರಲ್ಲೂ ಇಲ್ಲ. ಕೆಲ ಕಿಡಿಗೇಡಿಗಳ ಕಿತಾಪತಿಯಿಂದಾಗಿ ಗಲಭೆ ಸಂಭವಿಸಿದ್ದು, ಅಂತಹವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಬೇಕು. ಈ ನಿಟ್ಟಿನಲ್ಲಿ ತನಿಖೆ ನಡೆದು ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸವಾಗಲಿ. ಈ ನಿಟ್ಟಿನಲ್ಲಾದರೂ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಕೊಂಡಿರುವ ಅಮಾಯಕರನ್ನಾದರೂ ಕಾಪಾಡುವ ನಿಷ್ಕಪಕ್ಷಪಾತ ಪ್ರಯತ್ನ ಅಧಿಕಾರಿಗಳಿಂದ ನಡೆಯಲಿ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಯೋಚಿಸಲಿ ಎಂಬುವುದು ಪ್ರಜ್ಞಾವಂತರ ಆಶಯ.!
ತುಂಗಾವಾಣಿ ಇದು ಸತ್ಯ-ಸಮರ.