ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.!

ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ
ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.!

ಕೊಪ್ಪಳ ಜಿಲ್ಲೆಯ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರೊಬ್ಬರು ಹಗಲಿರುಳು ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಅದ್ಹೇಗೆ ಶ್ರಮಿಸುತ್ತಿದ್ದಾರೆ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅದ್ಹೇಗೆ ತನ್ನ ಅಧೀನದ ಸಿಬ್ಬಂದಿಗಳನ್ನು ಹಗಲಿರುಳು ಎನ್ನದೇ ದುಡಿಸಿಕೊಳ್ಳುತ್ತಿದ್ದಾರೆ ಎಂಬುವುದರ ವಿಸ್ತೃತ ವರದಿ ಇಲ್ಲಿದೆ ನೋಡಿ.

ಸುಭಾನ್‌ಸಾಬ್ ಈತ ಕೊಪ್ಪಳ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಒಂದೆರೆಡು ವರುಷ ಕಳೆದಿರಬಹುದು ಅಷ್ಟೇ. ಮೇಲ್ನೋಟಕ್ಕೆ ಯಾವೋಬ್ಬ ಅಧಿಕಾರಿಯೂ ನಿರ್ವಹಿಸದಷ್ಟೂ ಕಾರ್ಯ ನಿರ್ವಹಿಸುವವನಂತೆ ಸಕ್ಕತ್ ಆಗಿ ಫೋಸ್ ಕೊಡುತ್ತಾನೆ. ನಿಜಕ್ಕೂ ಈತ ಒಬ್ಬ ಒಳ್ಳೆಯ ಡ್ರಾಮಾ ಆರ್ಟಿಸ್ಟ್. ತನ್ನ ಕೈ ಕೆಳಗಿನ ಸಿಬ್ಬಂದಿಗಳಿಗೆ ತಾನೊಬ್ಬ ದಕ್ಷ ಅಧಿಕಾರಿ ಎಂಬಂತೆ ಬಿಂಬಿಸಲು ನಾನಾ ನಾಟಕಗಳನ್ನು ಆಡುತ್ತಾನೆ. ಆದರೆ ಒಳಒಳಗೆ ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಹಿತಾಸಕ್ತಿಗಾಗಿ ಮತ್ತು ತನ್ನ ಲಾಭಕ್ಕಾಗಿ ಅದೆಷ್ಟು ಶ್ರಮಿಸುತ್ತಾನೆಂದರೆ ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಆಸಾಮಿ ಈ ಹಿಂದೆ ರಾಯಚೂರು ಹಾಗೂ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿ ಅಮಾನತ್ತುಗೊಂಡು ಕೊಪ್ಪಳ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಗೆ ಗುತ್ತಿಗೆದಾರರೊಬ್ಬರ ಕೃಪಕಟಾಕ್ಷದಿಂದ ವಕ್ಕರಿಸಿಕೊಂಡು ಆ ಗುತ್ತಿಗೆದಾರನಿಗೆ ತಿರುಮಂತ್ರ ಹಾಕಿದ ಕಾರಣದಿಂದಾಗಿ ವರ್ಗಾವಣೆಗೊಂಡು ಸದ್ಯಕ್ಕೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಅಂಡೂರಿಕೊಂಡು ಕುಳಿತಿದ್ದಾನೆ.

ಪ್ರಸ್ತುತ ಏಳು ಕೋಟಿ ರೂಪಾಯಿ ಮೊತ್ತದ ಬಿಲ್‌ಗಳನ್ನು ಪಾವತಿಸುವ ತರಾತುರಿಯಲ್ಲಿರುವ ಈತ. ಮಹಿಳೆ, ಪುರುಷ ಎಂಬ ಭೇದಭಾವ ಇಲ್ಲದೇ ತನ್ನ ಸಿಬ್ಬಂದಿಗಳನ್ನು ಹಗಲಿರುಳು ದುಡಿಸಿಕೊಳ್ಳುತ್ತಿದ್ದಾನೆ. ಮಹಿಳಾ ಸಿಬ್ಬಂದಿಗಳ ಗೋಳು ಹೇಳತೀರದು. ಈತನ ಒತ್ತಡದಿಂದಾಗಿ ರಾತ್ರಿ ಸರಾಸರಿ 08:30ರ ವರೆಗೆ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳ ಕುಟುಂಬದಲ್ಲಿ ಕಲಹ ಉಂಟಾಗಿದೆ. ಆದರೂ ಮಹಿಳಾ ಸಿಬ್ಬಂದಿಗಳು ಅಸಹಾಯಕತೆಯಿಂದ ಕಾರ್ಯನಿರ್ವಹಿಸುವ ದುಸ್ಥಿತಿ ಉಂಟಾಗಿದೆ. ತಡರಾತ್ರಿ ಮಹಿಳಾ ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸುವಂತೆ ಆದೇಶಿಸಿರುವ ಈ ವ್ಯಕ್ತಿ ಅವರ ಎದುರು ಸ್ವತಃ ತಾನೇ ನಿಂತು ಎಂ.ಬಿ. ಬುಕ್‌ಗಳನ್ನು ಬರೆಸುತ್ತಾನೆ. ಪೆಂಡಿಂಗ್ ಬಿಲ್‌ಗಳನ್ನು ಬ್ರೋಕರ್‌ಗಳ ಸಮ್ಮುಖದಲ್ಲಿಯೇ ತರಾತುರಿಯಲ್ಲಿ ಸಹಿ ಮಾಡುತ್ತಾನೆ. ರಾತ್ರಿ ವೇಳೆಯ ಈತನ ಕಾರ್ಯಚಟುವಟಿಕೆ ಅದೆಷ್ಟು ಉತ್ಸಾಹದಿಂದ ಕೂಡಿರುತ್ತದೆ ಎಂದರೆ ಅಪ್ಪಿತಪ್ಪಿ ನಿದ್ರೆ ಬಂದ್ರೆ ನಿದ್ರೆಯನ್ನು ಒದ್ದೋಡಿಸಲು ಫುಲ್‌ಫ್ಯಾಕ್ ಸಿಗರೇಟ್ ಸಿದ್ಧವಿರುತ್ತದೆ. ಸಿಗರೇಟ್ ಪ್ಯಾಕ್‌ನ್ನು ಟೇಬಲ್ ಮೇಲೆ ಇಟ್ಟುಕೊಂಡೇ ಕೆಲಸ ಮಾಡುವ ಈತನ ಸಹಿಗಾಗಿ ಗುತ್ತಿಗೆದಾರರ ಹಿಂಬಾಲಕರು ಕಚೇರಿಯ ಟೇಬಲ್ ಮೇಲೆ ಕುಳಿತು ದುಂಡು ಮೇಜಿನ ಚರ್ಚೆ ನಡೆಸುತ್ತಿರುತ್ತಾರೆ. ಸರಕಾರಿ ನಿಯಮದಂತೆ ಯಾವೋಬ್ಬ ಸಿಬ್ಬಂದಿಯೂ ಅದರಲ್ಲಿಯೂ ವಿಶೇಷವಾಗಿ ಮಹಿಳಾ ಸಿಬ್ಬಂದಿಗಳು ತಡರಾತ್ರಿವರೆಗೆ ಕಾರ್ಯನಿರ್ವಹಿಸುವಂತಿಲ್ಲ. ಆದರೆ, ಸುಭಾನ್‌ಸಾಬ್‌ನ ಓವರ್ ಬಿಲ್ಡಪ್‌ಗೆ ಹೆದರಿದ ಸಿಬ್ಬಂದಿಗಳು ಕಿಮಕ್ ಎನ್ನದೇ ಪಾಪ ತಡರಾತ್ರಿವರೆಗೂ ಕಾರ್ಯನಿರ್ವಹಿಸುತ್ತಾರೆ. ಅಷ್ಟಕ್ಕೂ ಉಸ್ತುವಾರಿ ಮಂತ್ರಿ ಅಥವಾ ಸಂಬಂಧಿಸಿದ ಇಲಾಖೆಯ ಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಸಭೆ ಇದೆಯಾ ಅಂದರೆ ಸದ್ಯಕ್ಕೆ ಅದ್ಯಾವುದೂ ಇಲ್ಲ. ಆದರೂ ಈ ಸುಭಾನ್ ಸಾಹೇಬರಿಗೆ ಅದ್ಹೇಕೆ ಅಷ್ಟು ತರಾತುರಿಯೋ ಗೊತ್ತಿಲ್ಲ. ಪಾಪ ಪ್ರತಿದಿನ ರಾತ್ರಿ ಕಛೇರಿಯ ಜವಾನ ಕಡತಗಳನ್ನು ಕಾರಿಗೆ ಹಾಕುವುದರಲ್ಲಿಯೇ ಸುಸ್ತಾಗಿಬಿಟ್ಟಿದ್ದಾನೆ. ಕಚೇರಿಯ ದಾಖಲೆಗಳು ಬಿಂದಾಸ್ ಆಗಿ ರಾತ್ರಿಯ ಹೊತ್ತು ಹೊರಹೋಗಿ ಹಗಲಲ್ಲಿ ಮತ್ತೇ ಕಚೇರಿ ಸೇರುತ್ತವೆ. ತನ್ನ ಕಮಿಷನ್‌ನ ಲಾಭಕ್ಕಾಗಿ ತನ್ನ ಅಧೀನದ ಸಿಬ್ಬಂದಿಗಳನ್ನು ಕಾನೂನು ಬಾಹೀರಾಗಿ ಹಗಲಿರುಳು ದುಡಿಸಿಕೊಳ್ಳುತ್ತಿರುವ ಸುಭಾನ್‌ಸಾಬ್‌ನ ದೌರ್ಜನ್ಯಕ್ಕೆ ಮಹಿಳಾ ಸಿಬ್ಬಂದಿಗಳು ಬೇಸತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಹಾಗೂ ಅಸಹಾಯಕತೆಯಿಂದ ಯಾವುದೇ ಪ್ರತಿರೋಧವನ್ನು ತೋರದೇ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಈ ಕುರಿತು ಸಮಗ್ರ ತನಿಖೆ ನಡೆದಿದ್ದೇ ಆದರೆ ಸುಭಾನ್‌ಸಾಬ್ ಹಾಗೂ ಗುತ್ತಿಗೆದಾರರ ನಡುವಿನ ಅಕ್ರಮ ಒಪ್ಪಂದದ ಗುಟ್ಟು ಬಯಲಾಗಲಿದೆ. ಈ ಕುರಿತು ಸನ್ಮಾನ್ಯ ಶ್ರೀ ಸುಭಾನ್‌ಸಾಬ್ ಅವರನ್ನು ಪ್ರಶ್ನಿಸಿದರೆ ನನಗೆ ಹೃದಯ ರೋಗವಿದೆ. ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾನ್ಯಾವತ್ತೂ ಸಿಗರೇಟ್ ಸೇದಿಲ್ಲ. ಆ ಚಟವೂ ನನಗಿಲ್ಲ.” ಎನ್ನುತ್ತಾನೆ. ಆದರೆ, ನಮ್ಮ ತುಂಗಾವಾಣಿ ನಡೆಸಿದ ಕುಟುಕು (ಸ್ಟ್ರಿಂಗ್) ಆಪರೇಷನ್‌ನಲ್ಲಿ ಈತನ ಪ್ರತಿಯೊಂದು ನಡುವಳಿಕೆಗಳು ರಿಕಾರ್ಡ್ ಆಗಿವೆ. ದಿನಾಂಕ : 23-09-2021 ಗುರುವಾರ ರಾತ್ರಿ 07:30ರ ನಂತರ ಕಚೇರಿಯಲ್ಲಿ ನಡೆದ ಪ್ರತಿಯೊಂದೂ ನಡಾವಳಿಗಳು ರಿಕಾರ್ಡ್ ಆಗಿವೆ. ಆ ವೇಳೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹೇಳಿಕೆಗಳೂ ದಾಖಲಾಗಿವೆ. ಸುಭಾನ್‌ಸಾಬ್‌ನ ಪ್ರಮಾಣಿಕತೆಯ ನಾಟಕ ಕೂಡ ದಾಖಲಾಗಿದೆ. ತಡರಾತ್ರಿಯಲ್ಲಿ ಕಚೇರಿಯಲ್ಲಿ ಬಿಂದಾಸ್ ಆಗಿ ಲಾಭ-ನಷ್ಟದ ಲೆಕ್ಕಚಾರ ಹಾಕುತ್ತಿದ್ದ ಗುತ್ತಿಗೆದಾರರು ಮತ್ತು ಅವರ ಹಿಂಬಾಲಕರ ಪ್ರತಿ ಚಟುವಟಿಕೆಗಳೂ ಕೂಡ ದಾಖಲಾಗಿವೆ. ಉಸ್ತುವಾರಿ ಮಂತ್ರಿ ಹಾಲಪ್ಪ ಆಚಾರ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ದಾಖಲೆಗಳ ಪ್ರತಿಗಳನ್ನು ನಮ್ಮ ತುಂಗಾವಾಣಿ ಪತ್ರಿಕೆ ನೀಡಲು ಸಿದ್ಧ. ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿರುವ ಭಾರತೀಯ ಜನತಾ ಪಕ್ಷದ ಸನ್ಮಾನ್ಯ ಸಚಿವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವರೇ….? ಕಾದು ನೋಡಬೇಕು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ನಾಳೆ, ನಾಡಿದ್ದು ಸ್ವಲ್ಪ ರಿಲೀಫ್. ಮೇ 24 ರಿಂದ ಏಳು ದಿನಗಳ ಕೊಪ್ಪಳ ಜಿಲ್ಲಾ ಲಾಕ್‌ಡೌನ್.! ಜಿಲ್ಲಾಧಿಕಾರಿ ವಿಕಾಸ್ ಕಿಶೋರ್.

ನಾಳೆ, ನಾಡಿದ್ದು ಸ್ವಲ್ಪ ರಿಲೀಫ್. ಮೇ 24 ರಿಂದ ಏಳು ದಿನಗಳ ಕೊಪ್ಪಳ ಜಿಲ್ಲಾ ಲಾಕ್‌ಡೌನ್.! ಜಿಲ್ಲಾಧಿಕಾರಿ ವಿಕಾಸ್ ಕಿಶೋರ್. …

error: Content is protected !!